ಆರ್ನಲ್ಡ್, ಥಾಮಸ್ (1795-1842). 

ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ. ವಿಂಚೆಸ್ಟರ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. 1807ರಲ್ಲಿ ವಿನ್ಸ್‍ಟರ್‍ಗೆ ತೆರಳಿ, ಆಕ್ಸ್‍ಫರ್ಡಿನಲ್ಲಿ ಕಾರ್ಪಸ್ ಕ್ರಿಸ್ಟಿ ಕಾಲೇಜ್ ಸೇರುವವರೆಗೂ ಅಲ್ಲಿಯೇ ಉಳಿದ. ನಾಲ್ಕು ವರ್ಷಗಳ ಅನಂತರ ಓರಿಯಲ್ ಕಾಲೇಜಿನ ಫೆಲೋ ಎಂದು ಆಯ್ಕೆಯಾದ. ವಿಶ್ವವಿದ್ಯಾನಿಲಯ ಬಿಟ್ಟ ಅನಂತರ ಲಾಲ್ ಹಾಮ್‍ನಲ್ಲಿ ಉಳಿದು, ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ಮತ್ತು ಅಧ್ಯಯನದಲ್ಲಿ ನಿರತನಾದ. ರೋಮ್ ಚರಿತ್ರೆ ಬರೆಯಲು ಪ್ರಾರಂಭಿಸಿದ. 1828ರಲ್ಲಿ ರಗ್‍ಬಿ ಶಾಲೆಯ ಮುಖ್ಯೋಪಾಧ್ಯಾಯನಾಗಿ ನೇಮಕಗೊಂಡ. ಶಾಲೆ ಕೇವಲ ಸಾಮಾನ್ಯ ಜ್ಞಾನ ಮತ್ತು ಸಾಹಿತ್ಯವನ್ನು ಬೋಧಿಸುವ ಸಂಸ್ಥೆಯಲ್ಲವೆಂದು ಹೇಳಿ ವ್ಯಕ್ತಿತ್ವದ ತರಬೇತಿಗೆ ಮಹತ್ತ್ವ ನೀಡಿದ. ಸಾರ್ವಜನಿಕ ಶಾಲೆಗಳ ಹೊರಗೂ ಇವನ ಪ್ರಭಾವ ಹರಡಿದ್ದು ಕಂಡುಬರುತ್ತದೆ. 1841ರಲ್ಲಿ ಆಕ್ಸ್‍ಫರ್ಡ್ ಕಾಲೇಜೊಂದರಲ್ಲಿ ಚರಿತ್ರೆಯ ಪ್ರಾಧ್ಯಾಪಕನೆಂದು ನೇಮಕಗೊಂಡ. ಇವನು ಪ್ರಸಿದ್ಧ ಕವಿ ಮ್ಯಾಥ್ಯೂ ಆರ್ನಲ್ಡ್‍ನ ತಂದೆ. ಸ್ವತಃ ಹಲವಾರು ಕೃತಿಗಳನ್ನೂ ರಚಿಸಿದ್ದಾನೆ. ನೀತಿಬೋಧೆಯ (ಸೆರ್ಮನ್ಸ್) ಹಲವು ಸಂಪುಟ ರಚಿಸಿದ. ಎ ಹಿಸ್ಟರಿ ಆಫ್ ರೋಮ್ ಟು ದಿ ಸೆಕೆಂಡ್ ಪ್ಯೂನಿಕ್ ವಾರ್ (3 ಸಂಪುಟಗಳು 1838-43). ಇಂಟ್ರಡಕ್ಟರಿ ಲೆಕ್ಚರ್ಸ್ ಆನ್ ಮಾಡರ್ನ್ ಹಿಸ್ಟರಿ (1842) ಮೊದಲಾದವು ಇವನ ಮುಖ್ಯ ಕೃತಿಗಳು. ಪ್ರಾಧ್ಯಾಪಕನಾಗಿ ಈತ ಶಾಲೆಯನ್ನು ನಡೆಸಿದ ಕ್ರಮ ಬಹು ಪ್ರಸಿದ್ಧವಾಯಿತಲ್ಲದೆ ಮುಂದೆ ಬಂದ ಅನೇಕರಿಗೆ ಮಾದರಿಯಾಯಿತು. ಥಾಮಸ್ ಹ್ಯೂಸ್‍ನ (1822-1896) ಟಾಮ್‍ಬೌನ್ಸ್ ಸ್ಕೂಲ್ ಡೇಸ್ ಎಂಬ ಕಾದಂಬರಿ ಅಂದಿನ ರಗ್‍ಬಿ ಶಾಲೆಯ ಜೀವನವನ್ನು ಬಹು ಸ್ವಾರಸ್ಯವಾಗಿ ಚಿತ್ರಿಸುತ್ತದೆಯಲ್ಲದೆ ಥಾಮಸ್ ಆರ್ನಲ್ಡನ ಪ್ರಾಧ್ಯಾಪಕಗಿರಿಯನ್ನು ವರ್ಣಿಸುತ್ತದೆ.				

(ಪರಿಷ್ಕರಣೆ: ಎಲ್. ಎಸ್. ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ